ಚಿಕ್ಕಂದಿನಲ್ಲಿ ರೇಡಿಯೋದಲ್ಲಿ ಬಂದ ಹಾಡನ್ನು ಕೇಳುತ್ತಾ, ಗುನುಗುನಿಸುತ್ತಾ ಸಂಗೀತಾಸಕ್ತಿ ಬೆಳೆಸಿಕೊಂಡೆ. ನನ್ನನ್ನು ಗಾಯಕಿಯನ್ನಾಗಿಸಿದ ಹಿರಿಮೆ ರೇಡಿಯೋಗೆ ಸಲ್ಲಬೇಕು ಎಂದು ಬಹುಭಾಷಾ ಗಾಯಕಿ ಮಲ್ಲಿಕಾ ಶೆಟ್ಟಿ ಮಂಗಳೂರು ನುಡಿದರು. ಅವರು ಆಗಸ್ಟ್ 30, ಬುಧವಾರದಂದು ರೇಡಿಯೋ ಸಾರಂಗ್ ನಲ್ಲಿ ನಡೆದ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತುಳು, ಕನ್ನಡ ನಾಟಕಗಳಿಗೆ ಹಿನ್ನೆಲೆ ಗಾಯಕಿಯಾಗಿ ಪರಿಚಯಿಸಲ್ಪಟ್ಟ ನಾನು ನಂತರ ಆರ್ಕೆಸ್ಟ್ರಾ ಹಾಗೂ ಆಲ್ಬಮ್ ಗಳಲ್ಲಿ ತುಳು, ಕನ್ನಡ, ಹಿಂದಿ, ಬ್ಯಾರಿ ಭಾಷೆಯ ಹಾಡುಗಳನ್ನು ಹಾಡುತ್ತಾ ಮನೆಯ ಜವಾಬ್ದಾರಿಯ ಜೊತೆ ಸಂಗೀತ ಕ್ಷೇತ್ರಕ್ಕೆ ಜೀವನ ಮುಡಿಪಾಗಿಟ್ಟು ಮನಸ್ಸಿನ ದುಃಖ ಮರೆಯುತ್ತಿದ್ದೇನೆ ಎಂದು ಭಾವ ತುಂಬಿ ನುಡಿದರು. ಸಿನಿಮಾ ಗಳಲ್ಲಿ ಹಾಡಲು ಅವಕಾಶ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಇವರು ಪ್ರತಿಭೆಗಳಿಗೆ ಸಾಮಾಜಿಕ ಪ್ರೋತ್ಸಾಹದ ಅಗತ್ಯವಿದೆ ಎಂದು ಮನನೊಂದು ನುಡಿದರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ, ಪ್ರಸ್ತುತ ಜತೆ ಕಾರ್ಯದರ್ಶಿಯಾಗಿ ಉದಯೋನ್ಮುಖ ಕಲಾವಿದರನ್ನು ಬೆಳೆಸುವ ಕಾರ್ಯದಲ್ಲಿ ಆನಂದವಾಗಿರುವುದಾಗಿ ತಿಳಿಸಿದರು. ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕನ್ನಡ, ತುಳು, ಹಿಂದಿ, ಬ್ಯಾರಿ, ಮಲಯಾಳಂ ಹಾಡುಗಳನ್ನು ಹಾಡಿ ರಂಜಿಸಿದ ಇವರು ಕೇಳುಗರೊಂದಿಗೆ ಮಾತನಾಡಿ ಖುಷಿಪಟ್ಟರು
-ಎಡ್ವರ್ಡ್ ಲೋಬೊ ರೇಡಿಯೋ ಸಾರಂಗ್.