Mrs Padmavathi: ಜೀವ ಹೋದ ನಂತರ ಇನ್ನೊಂದು ಜೀವ ಉಳಿಸೋಣ 

 
"ನಮ್ಮ ದೇಹದ ಅಂಗಾಂಗಗಳು ಬೂಧಿಯಾಗುವ ಅಥವಾ ಮಣ್ಣಿನಲ್ಲಿ ಕರಗುವ ಬದಲಿಗೆ ನಮ್ಮ ದೇಹದ ಅಂಗಾಂಗಗಳಿಂದ ಮತ್ತೊಬ್ಬ ವ್ಯಕ್ತಿಗೆ ಪ್ರಾಣದಾನ ಮಾಡುವ ಮೂಲಕ ಸಾರ್ಥಕ ಮೆರೆಯೋಣ," ಎಂದು ಜಿಲ್ಲ‍ಾ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಅಂಗಾಂಗ ದಾನ ಮತ್ತು ಕಸಿ ವಿಭಾಗದ ಸಂಯೋಜಕರಾದ ಶ್ರೀಮತಿ ಪದ್ಮಾವತಿ ಅವರು ಹೇಳಿದರು. 
 
ಅವರು ಜೂನ್ 2ರಂದು ವಾರದ ಹಲೋ ವೆನ್ಲಾಕ್ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ 'ಅಂಗಾಂಗ ದಾನ ಮತ್ತು ಜೀವ ಸಾರ್ಥಕತೆ' ವಿಷಯದಲ್ಲಿ ಮಾತನಾಡಿದರು.
 
 
 
 
 
ಆದರ್ಶ ವ್ಯಕ್ತಿಗಳ ಹಾದಿಯಲ್ಲಿ ನಡೆಯಲು ನಮಗೆಲ್ಲರಿಗೂ ಅವಕಾಶ ಮಾಡಿಕೊಡುವ ಪುಣ್ಯಕರ ಕಾರ್ಯವೇ ಅಂಗಾಂಗ ದಾನ. ಇನ್ನೊಬ್ಬರ ಜೀವ ಉಳಿಸುವ, ಸಾವಿನ ನಂತರವೂ ಮತ್ತೊಬ್ಬರಿಗೆ ಬದುಕು ನೀಡುವ ಈ ದಾನ ಎಲ್ಲಕ್ಕಿಂತ ಶ್ರೇಷ್ಠ ದಾನ. ವಯಸ್ಸಿನ ಅಂತರವಿಲ್ಲದೆ, ಲಿಂಗಬೇಧವಿಲ್ಲದೆ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು. 18 ವಯಸ್ಸಿನ ಕೆಳಗಿನವರ ಅಂಗಾಂಗವನ್ನು ಪೋಷಕರು ದಾನ ಮಾಡಬಹುದು, ಎಂದರು.
 
ದೇಶದಲ್ಲಿ ನಿತ್ಯ ಅನೇಕ ಜನರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಪೈಕಿ ಮಿದುಳು ನಿಷ್ಕ್ರಿಯಗೊಂಡವರ ದೇಹದ ಇತರೆ ಅಂಗಗಳನ್ನು ದಾನ ಮಾಡಲು ಅವಕಾಶವಿದೆ. ಭಯ, ಸಾಮಾಜಿಕ ಕಳಂಕಕ್ಕೆ ಹೆದರಿ ಜನರು ಇದರಿಂದ ಹಿಂದೆ ಸರಿಯುತ್ತಿದ್ದಾರೆ. ಭಾರತದಂತಹ ಅತ್ಯಧಿಕ ಜನಸಂಖ್ಯೆ ಇರುವ ದೇಶದಲ್ಲಿ ಅಂಗಾಂಗಳಿಗೆ ಇರುವ ಪರದಾಟವನ್ನು ಗಮನಿಸಿದರೆ ಜಾಗೃತಿಯ ಕೊರತೆ ಎದ್ದು ಕಾಣುತ್ತಿದೆ. ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಅಂಗಾಂಗ ದಾನ ಘೋಷಣೆ ಮಾಡುವ ಅಗತ್ಯವಿದೆ, ಎಂದು ಒತ್ತಿ ಹೇಳಿದರು.
 
ಅಂಗಾಂಗ ದಾನ ಕಾರ್ಯದ ಪ್ರಮುಖ ಕೆಲಸಗಳೇನು ಎಂದು ಪ್ರಶ್ನಿಸಿದಾಗ, ಅಂಗಾಂಗ ದಾನ ಮಾಡುವ ವ್ಯಕ್ತಿಯ ಹಾಗೂ ರೋಗಿಯ ರಕ್ತದ ಗುಂಪನ್ನು ಮೊದಲಿಗೆ ಪರೀಕ್ಷೆ ಮಾಡಲಾಗುತ್ತದೆ. ನಂತರ ಅಂಗಾಂಗ ದಾನ ಮಾಡುವವರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತದೆ. ಮೆಡಿಕಲ್, ಕ್ಲಿನಿಕಲ್ ಹಾಗೂ ಫಿಟ್ನೆಸ್ ಟೆಸ್ಟ್‌ ಮಾಡಲಾಗುತ್ತದೆ. ಅದು ಎಲ್ಲಾ ಸರಿ ಇದ್ದರೆ ನಂತರ ಅಂಗಾಂಗಗಳನ್ನು ದಾನವಾಗಿ ಪಡೆಯಲಾಗುತ್ತದೆ, ಎಂದು ಉತ್ತರಿಸಿದರು. 
 
ಕಸಿ ಕಾರ್ಯದ ಬಗ್ಗೆ ಕೇಳುಗರೊಬ್ಬರು ಕೇಳಿದ ಪ್ರಶ್ನೆಗೆ, ಅಂಗಾಂಗಗಳನ್ನು ತೆಗೆದುಕೊಂಡ ನಂತರ ಬೇರೆ ರೋಗಿಗೆ ಅಂಗಾಂಗ ಕಸಿ ಮಾಡಲಾಗುತ್ತದೆ. ಹಾಗಾಗಿ ಅವರ ದೇಹಕ್ಕೆ ಸರಿ ಹೊಂದುವಂತೆ ಮ್ಯಾಚ್ ಟೆಸ್ಟ್ ಮಾಡಲಾಗುತ್ತದೆ. ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಕೆಲವು ಮುಂಜಾಗ್ರತೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ.‌ ಕಿಡ್ನಿ ಕಸಿ ಮಾಡಿದರೆ ಆ ವ್ಯಕ್ತಿ 20 ರಿಂದ 25 ವರ್ಷ ಆರೋಗ್ಯವಾಗಿರುತ್ತಾನೆ. ಆ ವ್ಯಕ್ತಿಗೆ ಡಯಾಲಿಸಿಸ್ ಇದ್ದರೆ ಆ ಕಿಡ್ನಿಯ ಆರೋಗ್ಯ 5 ವರ್ಷಗಳ ತನಕ ಚೆನ್ನಾಗಿ ಇರುತ್ತದೆ, ಎಂದು ತಿಳಿಸಿದರು.
 
ಕೇಳುಗರ ಅನೇಕ ಪ್ರಶ್ನೆಗಳಿಗೂ, ಸಂಶಯಗಳಿಗೂ  ಉತ್ತರಿಸುತ್ತಾ ಹೋದ ಪದ್ಮಾವತಿ ಪದ್ಮಾವತಿ  ಅವರು ಕೊನೆಗೆ ಜೀವ ಹೋದ ನಂತರ ಇನ್ನೊಂದು ಜೀವವನ್ನಾದರೂ ಉಳಿಸುವ ಈ ಪುಣ್ಯ ಕಾರ್ಯಕ್ಕೆ ಎಲ್ಲರೂ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ, ಎಂದರು.
 
- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್