Naveen Bondel: ಕಾಂತಾರ ಪಾತ್ರದ ಯಶಸ್ಸಿಗೆ ಕಣ್ಣುಗಳ ಪಾತ್ರ ಕಾರಣವಾಯಿತು

ಕಾಫಿ ಬಿಸ್ಕೆಟಿನ ಆಶೆಯಿಂದ ಊರಲ್ಲಿ ನಡೆಯುತ್ತಿದ್ದ ನಾಟಕದ ಪ್ರಾಕ್ಟೀಸಿಗೆ ಹಾಜರಾಗಿ ನಾಟಕದ  ಬಗ್ಗೆ ಆಸಕ್ತಿ ತಳೆದೆ. ಇದು ನನ್ನನ್ನು ಕಾಂತಾರ ಚಲನಚಿತ್ರದಲ್ಲಿ ಪಾತ್ರ  ಮಾಡುವವವರೆಗೆ  ಬೆಳೆಸಿದೆ. ಈ ಕಾಂತಾರ ಚಲನಚಿತ್ರದ ದೈವಪಾತ್ರಿಯ ಪಾತ್ರದ ಯಶಸ್ಸಿನಲ್ಲಿ ನನ್ನ ಕಣ್ಣಿನ ಪಾತ್ರವೇ ಪ್ರಮುಖ ಎಂದರೆ  ತಪ್ಪಿಲ್ಲ. ಎಂದು ರಂಗಭೂಮಿ ಹಾಗೂ  ಚಲನಚಿತ್ರನಟ ಕಾಂತಾರ ಖ್ಯಾತಿಯ ನವೀನ್ ಬೋಂದೆಲ್ ನುಡಿದರು.

ಅವರು ಜನವರಿ 11ರಂದು ಬುಧವಾರ ರೇಡಿಯೋ ಸಾರಂಗ್’ನಲ್ಲಿ ನಡೆದ ಹೃದಯರಾಗ  ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬಡತನದಲ್ಲಿ ಅರಳಿದ ಪ್ರತಿಭೆಯಾದ  ನವೀನ್ ಬೋಂದೆಲ್ ಮೊದಲು ಬಸ್ ಕಂಡಕ್ಟರ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಬಿಡುವಿನ ವೇಳೆಯಲ್ಲಿ ನಾಟಕ  ಮಾಡುತ್ತಾ ಹೆಸರು ಮಾಡಿದರು. ಕಳೆದ  30 ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ’ಓರಿಯಾರ್ದೋರಿ ಅಸಲ್’ ಸಿನಿಮಾ ಸೇರಿದಂತೆ ಕನ್ನಡ, ತುಳು ಸಿನಿಮಾಗಳಲ್ಲಿ ನಟಿಸಿ ಅನುಭವ ಪಡೆದ ಇವರಿಗೆ ’ಕಾಂತಾರ’ ಮರುಜನ್ಮ ನೀಡಿದೆ. ’ಈಗ ಜಗತ್ತೇ ನನ್ನನ್ನು ಗುರುತಿಸುವಂತೆ ಆಗಿದ್ದು ಇದು ದೈವಕೃಪೆ,’ ಎಂದರು.

ನಟ  ರಜನಿಕಾಂತ್ ನನಗೆ  ರೋಲ್ ಮಾಡೆಲ್ ಎಂದ ಇವರು  ಅವರನ್ನು ಮುಖತಃ ಭೇಟಿಯಾಗುವ ಕನಸಿದೆಯೆಂದರು. ಈಗ ಹಲವಾರು ಚಲನಚಿತ್ರಗಳಿಗೆ ಆಫರ್ ಬರುತ್ತಿದ್ದು ಸದ್ಯಕ್ಕೆ ’ಸಲಾರ್’ ತೆಲುಗು ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ, ಎಂದರು. ಬಸ್ ಕಂಡಕ್ಟರ್ ಕೆಲಸ ಬಿಟ್ಟು ಸ್ವಉದ್ಯೋಗ ಕೈಗೊಂಡು ನಷ್ಟ ಅನುಭವಿಸಿದ ಇವರಿಗೆ ಈಗ ಗೆಲುವಿನ ಅನುಭವವಾಗುತ್ತಿದೆಯೆಂದು ಗೆಲುವಿನ ನಗೆ ಬೀರಿದರು. ಕೇಳುಗರ ಅಪೇಕ್ಷೆ ಮೇರೆಗೆ ಮಿಮಿಕ್ರಿ ನಾಟಕ ಸಂಭಾಷಣೆ ಹೇಳಿ ರಂಜಿಸಿದ ಇವರು ಹಲವಾರು ಕರೆಗಳಿಗೆ ಉತ್ತರಿಸಿದರು.

- ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್.