ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿಯು ತನ್ನ ಅಧ್ಯಯನ ಪ್ರವಾಸದ ಅಂಗವಾಗಿ ರೇಡಿಯೋ ಸಾರಂಗ್ 107.8 ಎಫ್ ಎಂ ಗೆ ಜೂನ್ 7 ಮಂಗಳವಾರದಂದು ಭೇಟಿ ನೀಡಿತು. ಈ ಸಂದರ್ಭದಲ್ಲಿ ರೇಡಿಯೋ ಸಾರಂಗ್'ನ ನಿರ್ದೇಶಕರಾದ ಡಾ. (ಫಾ.) ಮೆಲ್ವಿನ್ ಪಿಂಟೋ ಅವರು ರೇಡಿಯೋ ಸಾರಂಗ್’ನ ಆಡಳಿತಾತ್ಮಕ ವಿಚಾರಗಳು ಹಾಗೂ ಸಮುದಾಯ ಬಾನುಲಿಯ ಕಾರ್ಯವೈಖರಿಯ ಕುರಿತು ವಿವರಿಸಿದರು. ಸಮುದಾಯ ಬಾನುಲಿಯಾಗಿ ತಮ್ಮ ಜವಾಬ್ದಾರಿ ಹಾಗೂ ರೇಡಿಯೋದ ಮೂಲಕ ಸಮುದಾಯದ ಜನರಿಗೆ ತಲುಪುವ ರೀತಿ ಹಾಗೂ ಸಮುದಾಯದ ಜೊತೆಗಿನ ಬಾಂಧವ್ಯದ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ರೇಡಿಯೋ ಸಾರಂಗ್’ನ ಮುಖ್ಯ ಕಾರ್ಯಕ್ರಮ ನಿರ್ವಾಹಕ ಆರ್ ಜೆ ಅಭಿಷೇಕ್ ಶೆಟ್ಟಿ ಅವರು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ತಾಂತ್ರಿಕ ವಿಷಯಗಳ ಕುರಿತು ರೇಡಿಯೋ ಸಾರಂಗ್'ನ ಆಡಿಯೋ ಇಂಜಿನಿಯರ್ ಆಗಿರುವ ಪಾಟ್ಸನ್ ಪಿರೇರಾ ಅವರು ವಿವರಿಸಿದರು. ಈ ಸಂದರ್ಭದಲ್ಲಿ ರೇಡಿಯೋ ಪಾಂಚಜನ್ಯದ ಆಡಳಿತ ಮಂಡಳಿ, ಸಿಬ್ಬಂದಿಗಳು ಹಾಗೂ ರೇಡಿಯೋ ಸಾರಂಗ್'ನ ಸಿಬ್ಬಂದಿಗಳು ಹಾಜರಿದ್ದರು.
- ಶ್ವೇತಾ ಇಂದಾಜೆ, ರೇಡಿಯೋ ಸಾರಂಗ್