Sanvi Chthrapura: ಸಾಮಾಜಿಕ   ಜಾಲತಾಣದಿ ಅರಳಿದ  ಅರಳು  ಪ್ರತಿಭೆ

ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಸಮಯ ಕಳೆಯಲು ಸಾಮಾಜಿಕ ಜಾಲತಾಣದಿ ಹಾಡಿದ ಹಾಡು ಬದುಕನ್ನೇ ಅರಳಿಸಿತು ಎಂದು ಬಾಲ ಪ್ರತಿಭೆ ಸಾನ್ವಿ ಭಟ್ ಚಿತ್ರಾಪುರ  ನುಡಿದರು.

ಅವರು ಫೆಬ್ರವರಿ 9ರಂದು ಬುಧವಾರ ರೇಡಿಯೋ ಸಾರಾಂಗ್’ನಲ್ಲಿ ನಡೆದ ನೇರ ಪ್ರಸಾರ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಭಾಗವಹಿಸಿ  ಮಾತನಾಡಿದರು.

ಚಿತ್ರಾಪುರದ  ನಿವಾಸಿಯಾಗಿರುವ ಸಾನ್ವಿ ಭಟ್, ರಾಜೇಶ್  ಭಟ್ ಮತ್ತು ಶ್ರೀಜಿತಾ ಭಟ್ ಇವರ ಎರಡನೇ ಪುತ್ರಿ. ಇವರ  ಅಕ್ಕ ನವಮಿ. ಅಂಕುರ್ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ  ಕುಳಾಯಿ  ಇಲ್ಲಿ 4ನೇ ತರಗತಿ ಯಲ್ಲಿ ಕಲಿಯುತ್ತಿರುವ  ಮಧ್ಯಮ  ವರ್ಗದ  ಕುಟುಂಬದ  ಹಿನ್ನೆಲೆ ಇರುವ ಸಾನ್ವಿ ಗಾಯಕಿಯಾಗಿ ಗಾಯನ ಕ್ಷೇತ್ರದಲ್ಲಿ ನೆಲೆ ಕಾಣುತ್ತೆನೆಂದು ನೆನೆಸಿರಲಿಲ್ಲ. ಸಾಮಾಜಿಕ ಜಾಲತಾಣದಿ (ಫೇಸ್ಬುಕ್ ಲೈವಲ್ಲಿ) ಹಾಡಿದ ’ನೀಡು ಶಿವ  ನೀಡದಿರು  ಶಿವ ’ ಹಾಡು ವೈರಲ್ ಆಗಿ ಜನಪ್ರಿಯತೆ ತಂದಿತ್ತಲ್ಲದೆ ಕನ್ನಡ, ತುಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಆಲ್ಬಮ್ ಸಾಂಗ್ ಹಾಡಲು ಅವಕಾಶ ಕಲ್ಪಿಸಿತು. ಚಿನಕುರಳಿ ಮಾತಿನ ಸಾನ್ವಿ ಹಾಡೋಕೆ ಸುರುಮಾಡಿದರೆ ಎಲ್ಲರಿಗೂ ಬೆರಗು ಮೂಡಿಸುತ್ತಾರೆ. ಸಾನ್ವಿ ಭಟ್ ತನ್ನ ಸಾನ್ವಿ ಕ್ರಿಯೆಷನ್ಸ್ ಮೂಲಕ ಯೂಟ್ಯೂಬಲ್ಲಿ 20ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದಲ್ಲದೆ ಒಳ್ಳೆಯ ಗಾಯಕಿಯಾಗಿ  ಮಿಂಚುತ್ತಾ  ಸುದ್ಧಿಯಲ್ಲಿದ್ದಾರೆ.

ಶಾಸ್ತ್ರೀಯ ಸಂಗೀತದ  ಪ್ರಾಥಮಿಕ  ಪಾಠಗಳನ್ನು  ಸಂಗೀತ  ಶಿಕ್ಷಕಿ  ಪಲ್ಲವಿ  ಸುರತ್ಕಲ್ ಇವರ  ಬಳಿ  ಆರು ತಿಂಗಳು  ಅಭ್ಯಾಸಿಸಿದರು.  ಕೊರೋನ ಕಾರಣದಿಂದ ಸಂಗೀತಾಭ್ಯಾಸಕ್ಕೆ ತಡೆಯಾದರೂ ಮುಂದೆ ಹೆಚ್ಚಿನ ಪ್ರಾಶಸ್ತ್ಯ  ನೀಡುವುದಾಗಿ ತಿಳಿಸಿದರು. ತನ್ನ ಹಾಡುವ ಆಸಕ್ತಿಗೆ ಮನೆಯವರ, ಶಾಲಾ ಶಿಕ್ಷಕರ, ಹಲವಾರು ಜನರ ಪ್ರೋತ್ಸಾಹವನ್ನು ನೆನೆದ ಇವರಿಗೆ ಭವಿಷ್ಯದಲ್ಲಿ ಸಿನಿಮಾಕ್ಕೆ ಹಿನ್ನೆಲೆ ಗಾಯಕಿಯಾಗಬೇಕೆಂಬ ಕನಸಿದೆ,  ಎಂದರು.