ದಿನಾಂಕ ಜುಲಾಯಿ 1ರಂದು 'ಮೈಕಾಲ್ತೊ ಪಲಕ' ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಮತ್ತು ಗಾಯಕ ಶರೀಫ್ ಕಾಟಿಪಳ್ಳರವರು ಭಾಗವಹಿಸಿದರು. ಇವರು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರುಗಳಿಸಿದ್ದಾರೆ. ಆರಂಭದಲ್ಲಿ ನೀವು ಯಾವ ಕ್ಷೇತ್ರದಲ್ಲಿ ನಿಮ್ಮ ಮೊದಲ ಹೆಜ್ಜೆ ಇಟ್ಟಿರುವುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಶಾಲಾ ಜೀವನದಲ್ಲೇ ಹೆಚ್ಚಾಗಿ ಹಾಡುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಆ ಸಮಯದಲ್ಲಿ ಆಕಾಶವಾಣಿಯಲ್ಲಿ ಬರುತ್ತಿದ್ದ ಚಿತ್ರಗೀತೆ ಮತ್ತು ಕೋರಿಕೆ ಪತ್ರ ಕಾರ್ಯಕ್ರಮವನ್ನು ದಿನಾಲೂ ಕೇಳ್ತಾ ಕೇಳ್ತಾ ನಾನು ಕೂಡಾ ಒಬ್ಬ ಹಾಡುಗಾರನಾಗಬೇಕೆಂಬ ಅಭಿರುಚಿ ಬೆಳೆದು ಬ್ಯಾರಿಯಲ್ಲಿ ಹಾಡುಗಳನ್ನು ಹಾಡ್ತಾ ಅನೇಕ ಆಲ್ಬಮ್ ಮಾಡುತ್ತಿದ್ದೆ. ಮುಂದೆ ಕನ್ನಡ, ತುಳು, ಮಳಯಾಳ೦ ನಲ್ಲೂ ಹಾಡಿಗೆ ಅಭಿನಯ ಮಾಡಿದೆ. ಇದರಿಂದ ಜನರ ಬೆಂಬಲ, ಪ್ರೋತ್ಸಾಹ ನಿರೀಕ್ಷೆಗೂ ಮೀರಿ ಸಿಗುತ್ತಿತ್ತು, ಎಂದು ಹೇಳಿದರು.
ಇವರು ಬಹುಭಾಷಾ ನಟರಾಗಿ, ಬ್ಯಾರಿ, ಕನ್ನಡ, ತುಳು ಮತ್ತು ಮಳಯಾಳ೦ನಲ್ಲೂ ನಟನೆಯ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಅನೇಕ ಕೇಳುಗರು ಕರೆಮಾಡಿ "ನೀವು 'ನಙಲೊ ಕುಟುಂಬ' ಮತ್ತು 'ಮಾಮಿ ಮರ್ಮೊಲು' ಬ್ಯಾರಿ ಟೆಲಿಫಿಲ್ಮ್ ಗಳಲ್ಲಿ ಮಾಡಿದ ನಟನೆ ಅತ್ಯದ್ಬುತವಾಗಿತ್ತು," ಎಂದು ಪ್ರಶಂಸಿದರು. ಹಾಗೆನೇ ಇವರು 'ದಮ್ ಬಿರಿಯಾಣಿ', 'ಓದಿ ಬಾನಿಯಾ', 'ಸಾವುಙಕರೊ ಸಾಲೆ', 'ಟೆರರಿಸ್ಟ್', 'ಸರಸ್ವತಿ' ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಒಂದಿಷ್ಟು ಕೇಳುಗರು ಕರೆ ಮಾಡಿ, ಕನ್ನಡದ 'ಗಾಜಿನ ಮನೆ' ಮತ್ತು ತುಳುವಿನ 'ಜೋಕುಲಾಟಿಕೆ', 'ಸಹನಾ' ಕಿರುಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಡೈಲಾಗ್'ಗೆ ಕೋರಿಕೆಯಿಟ್ಟಾಗ ಇವರು ಡೈಲಾಗ್ ಹೇಳಿ ಕೇಳುಗರ ಮನರಂಜಿಸಿದರು.
ಶರೀಫ್ ಇವರು ಅನೇಕ ಕವಿಗೋಷ್ಠಿಗಳಲ್ಲೂ ಭಾಗವಸಿದ್ದಾರೆ. ಒಂದೆರಡು ಕವನಗಳನ್ನು ಇವರು ವಾಚಿಸಿದಾಗ ಅದಕ್ಕೆ ಕೇಳುಗರ ಉತ್ತಮ ಪ್ರತಿಕ್ರಿಯೆ ಕೂಡಾ ಬಂತು. ಒಟ್ಟಿನಲ್ಲಿ ಒಂದಿಷ್ಟು ಡೈಲಾಗ್, ಹಾಡುಗಳಿಂದ, ತಮ್ಮ ಕವನಗಳಿಂದ ಕೇಳುಗರ ಮನತಣಿಸುತ್ತಾ ಹೋದರು.